ಪೂರಕ ಶಿಕ್ಷಣ -
ಸರ್ಕಾರೀ ಶಾಲೆಗಳು ಅಥವಾ ಅದರಿಂದ ಅಂಗೀಕೃತವಾದ ಖಾಸಗಿ ಶಾಲೆಗಳು ನಡೆಯುವ ಕಾಲಕ್ಕೆ ಹೊರತಾದಂತೆ ಸಂಜೆ ಅಥವಾ ರಜಾ ದಿನಗಳಲ್ಲಿ ಮಕ್ಕಳಿಗೆ ಅಥವಾ ವಯಸ್ಕರಿಗೆ ನೀಡುವ ವಿಶೇಷ ರೀತಿಯ ಶಿಕ್ಷಣ. ಇದು ಧಾರ್ಮಿಕ ಸಾಂಸ್ಕøತಿಕ ಅಥವಾ ಔದ್ಯೋಗಿಕ ವಿಷಯಗಳಿಗೆ ಸಂಬಂಧಿಸಿದ್ದಾಗಿರಬಹುದು.

	ಯೆಹೂದ್ಯರ ಧಾರ್ಮಿಕ ಅಥವಾ ಮತೀಯ ಸಂಸ್ಥೆಗಳು ತಮ್ಮ ಮಕ್ಕಳಿಗೆ ಸಾರ್ವಜನಿಕ ಶಾಲೆಗಳು ನೀಡುವ ಸಾಮಾನ್ಯ ಶಿಕ್ಷಣದ ಜೊತೆಗೆ ಇಂಥ ಪೂರಕ ಶಿಕ್ಷಣವನ್ನು ನೀಡುವುದುಂಟು. ಸೋಮವಾರ, ಗುರುವಾರ, ಭಾನುವಾರ ಈ ದಿನಗಳಲ್ಲಿ ಅದು ತರಗತಿ ನಡೆಸುವುದು, ಸಾರ್ವಜನಿಕ ಶಾಲೆಗಳ ಶಿಕ್ಷಣದ ಪರಿಮಿತಿಯಲ್ಲಿ ಸೇರದಿರುವ ಯೆಹೂದ್ಯ ಧರ್ಮ, ಸಂಸ್ಕøತಿ, ಸಂಪ್ರದಾಯ ಮುಂತಾದ ಅಂಶಗಳಲ್ಲಿ ಅಲ್ಲಿ ಶಿಕ್ಷಣ ನೀಡಲಾಗುವುದು. 

	ಕೆಲವು ಔದ್ಯೋಗಿಕ ಶಿಕ್ಷಣದ ಅಂಗವಾಗಿ ಪೂರಕ ಶಿಕ್ಷಣದ ವ್ಯವಸ್ಥೆ ಇರುವುದುಂಟು. ಉದಾ-ಕೃಷಿ ಶಿಕ್ಷಣ ತರಗತಿಯ ವೇಳೆಯಲ್ಲಿ ಬೋಧಿಸಿದ ಬೇಸಾಯಕ್ಕೆ ಸಂಬಂಧಿಸಿದ ಜ್ಞಾನವನ್ನು ವಿದ್ಯಾರ್ಥಿಗಳು ಹೊಲ ಗದ್ದೆಗಳಲ್ಲಿ ತಜ್ಞನ ನೇತೃತ್ವದಲ್ಲಿ ಪ್ರಯೋಗಿಸಿ ನೋಡುವರು. ಇದರಿಂದ ಅವರಿಗೆ ಅಗತ್ಯವಾದ ಪೂರಕ ಅನುಭವ ಒದಗುವುದು.

	ಶಾಲೆ ಬಿಟ್ಟು ಉದ್ಯೋಗ ನಿರತರಾಗಿರುವ ವಯಸ್ಕರಿಗೆ ಅವರ ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕøತಿಕ ಜೀವನವನ್ನು ಉತ್ತಮಪಡಿಸುವಂಥ ಶಿಕ್ಷಣವನ್ನು ಶ್ರಮಿಕರ ಶಿಕ್ಷಣ ಸಂಸ್ಥೆಗಳೂ ಯುವಜನ ಸಂಘಗಳು ಏರ್ಪಡಿಸುವುದುಂಟು.

	ತೀರಪಕ್ಷೀಯವಲ್ಲದ ಹಾಗೂ ಮತೀಯವಲ್ಲದ ಇಂಥ ಪೂರಕ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಪುರಸ್ಕಾರವೂ ಅನುದಾನವೂ ಇರುವುದುಂಟು.       									(ಎನ್.ಎಸ್.ವಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ